
27th April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಕೊಪ್ಪಳ ಜಿಲ್ಲೆಯಾದ್ಯಂತ ಮಾವು ಬೆಳೆ ಈಗ ಕಟಾವಿಗೆ ಸಿದ್ದವಾಗಿದೆ. ರೈತರಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದ್ದು, ವೈಜ್ಞಾನಿಕವಾಗಿ ಹಣ್ಣು ಮಾಗಿಸಿದಲ್ಲಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿರುತ್ತಾರೆ.
ಮಾವು ಕಟಾವು ಮೊದಲು ರೈತರು ಮ್ಯಾಚುರಿಟಿ ಇಂಡೆಕ್ಸ್ ಅಂದರೆ, ಹಣ್ಣಿನ ಆಕಾರ, ಗಾತ್ರ ಮತ್ತು ಬಣ್ಣ ಆಧರಿಸಿ ಹಣ್ಣುಗಳು ಕಟಾವಿಗೆ ಬಂದಿದೆ, ಹಣ್ಣುಗಳ ಬುಜಗಳು ಎತ್ತರವಾಗಿ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ ಎನ್ನುವ ಸೂಚನೆ ಕುರಿತು ತಿಳಿದುಕೊಂಡಿರಬೇಕು. ಸಾಮಾನ್ಯವಾಗಿ ತಳಿಯನ್ನಾಧರಿಸಿ ಕಾಯಿ ಕಚ್ಚಿದ ನಂತರ 15 ರಿಂದ 16 ವಾರಗಳಲ್ಲಿ ಕಾಯಿಗಳು ಕಟಾವಿಗೆ ಬರುತ್ತವೆ. ಈ ಸಮಯದಲ್ಲಿ 6 ರಿಂದ 8 ಕಾಯಿಗಳು ಉದುರಿ ಬೀಳುತ್ತವೆ. ಇವೆಲ್ಲವುಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ಕೊಯ್ಲು ಮಾಡಬೇಕು. ಕಟಾವು ಮಾಡುವಾಗ ಸುಮಾರು 1 ರಿಂದ 1.5 ಇಂಚಿನಷ್ಟು ದೇಟಿನೊಂದಿಗೆ ಕಟಾವು ಮಾಡಿ ನೆರಳಿನಲ್ಲಿ ಆರಿಸಬೇಕು.
ಮಾವು ಮಾಗಿಸುವ ಪ್ಲಾಸ್ಟಿಕ್ ಟೆಂಟ್ ವಿವರಣೆ: ಮಾವು ಮಾಗಿಸುವ ಟೆಂಟುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೇಸರಘಟ್ಟ, ಬೆಂಗಳೂರುನಲ್ಲಿ ಲಭ್ಯವಿರುತ್ತವೆ (ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ದೂ.ಸಂ: 080-28446815). ಈ ಟೆಂಟುಗಳು 200 ಮೈಕ್ರಾನ್ ಪ್ಲಾಸ್ಟಿಕ್ನಿಂದ ತಯಾರಿಸಲಾಗಿದ್ದು, ಸುಮಾರು 4 ಘನ ಮೀಟರ ಅಳತೆಯುಳ್ಳದ್ದಾಗಿದೆ ಮತ್ತು ಒಂದು ಟನ್ನಷ್ಟು ಹಣ್ಣುಗಳನ್ನು ಮಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಒಳಗಡೆ ಸುಮಾರು 750 ಕೆ.ಜಿ. ಹಣ್ಣುಗಳನ್ನು ಪ್ಲಾಸ್ಟಿಕ್ ಟ್ರೇಗಳಲ್ಲಿ ಅಳವಡಿಸಿ ನಂತರ 5 ಲೀಟರ್ ನೀರಿಗೆ 10 ಮಿ.ಲೀ. ಇಥ್ರೇಲ್ ಜೊತೆಗೆ 2 ಗ್ರಾಂ. ಸೋಡಿಯಂ ಹೈಡ್ರಾಕ್ಸೈಡ್ ಹರಳುಗಳನ್ನು ಮಿಶ್ರಣಮಾಡಿ ಈ ಟೆಂಟನಲ್ಲಿಟ್ಟು ತಕ್ಷಣ ಗಾಳಿಯಾಡದಂತೆ ಸೀಲ್ ಮಾಡಬೇಕು. ಇದರ ಜೊತೆಗೆ ಒಂದು ಬ್ಯಾಟರಿ ಚಾಲಿತ ಫ್ಯಾನ್ಇಡುವುದು ಹೆಚ್ಚು ಸೂಕ್ತ. ಈ ರೀತಿ ಉಪಚಾರ ಮಾಡಿದ 24 ಗಂಟೆಗಳ ನಂತರ ಟ್ರೇಗಳನ್ನು ಹೊರಗಡೆ ತೆಗೆದಿಡಬೇಕು. ಈ ರೀತಿ ಉಪಚರಿಸಿದ ಹಣ್ಣುಗಳು 4 ರಿಂದ 5 ದಿನಗಳಲ್ಲಿ ಏಕರೂಪವಾಗಿ ಪಕ್ವಗೊಳ್ಳುತ್ತವೆ. ಇಂತಹ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆ ಇದೆ.
ಈ ಟೆಂಟಗಳ ಬೆಲೆ ಸುಮಾರು ರೂ. 4,000 ಇದ್ದು, ಈಗಾಗಲೇ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ನೆಲೊಗಲ್ ಗ್ರಾಮದ ಶ್ರೀನಿವಾಸ ಜಾಲಿಹಾಳ ರವರ ತೋಟದಲ್ಲಿ ಲಭ್ಯವಿದ್ದು, ಪ್ರಾತ್ಯಕ್ಷಿಕವಾಗಿ ರೈತರು ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ (ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಮೊ.ಸಂ. 8310431243). ಇಂತಹ ಹಣ್ಣುಗಳನ್ನು ಎ.ಬಿ.ಸಿ. ಎಂದು ವರ್ಗಿಕರಿಸಿ 45x 6 x 17 ಸೆಂ.ಮೀ. ಅಥವಾ 32x 27x 10 ಸೆಂ.ಮೀ. ಗಾತ್ರದ ಪೆಟ್ಟಿಗೆಗಳಲ್ಲಿ ಮೆತ್ತನೆಯ ಹಾಸು (ಪೇಪರ್ ತುಂಡು ಅಥವಾ ಕಟ್ಟಿಗೆ ಹೊಟ್ಟು) ಹಾಕಿ ದೂರದ ಊರುಗಳಿಗೆ ಸಾಗಿಸಬಹುದಾಗಿದೆ. ನಿಲೋಗಲ್ ಗ್ರಾಮದಲ್ಲಿ ಮಾವು ಮಾಗಿಸುವ ಪ್ಲಾಸ್ಟಿಕ್ ಟೆಂಟ್ ಬಗ್ಗೆ ವಿಧಾನ ಪ್ರಾತ್ಯಕ್ಷಿಕೆಯನ್ನು ಮಾಡಿ ರೈತರಿಗೆ ತೋರಿಸಲಾಗಿದ್ದು, ಇದರ ಪ್ರಾಮುಖ್ಯತೆಯನ್ನು ಹೆಚ್ಚಿನ ರೈತರು ತಿಳಿದುಕೊಂಡು ಆದಾಯವನ್ನು ಹೆಚ್ಚಿಸಬೇಕೆಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ತಿಮ್ಮಣ್ಣ ಚವಡಿ ಅವರು ತಿಳಿಸಿದ್ದಾರೆ.
ವಿಶ್ವ ಮಲೇರಿಯಾ ದಿನ ಜಾಗೃತಿ ಜಾಥಾ ಕಾರ್ಯಕ್ರಮ ಯಾವುದೇ ಜ್ವರವಿರಲಿ ರಕ್ತ ಪರಿಕ್ಷೆ ಮಾಡಿಸಿಕೊಳ್ಳಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ ಮಲೇರಿಯಾದಿಂದ ಮುಕ್ತರಾಗಿ